ಕಾಡುಗೋದಿ

ಫ್ಯಾಗೋಪೈರಮ್ ಎಸ್ಕುಲೆಂಟಮ್ ಎಂಬ ವೈಜ್ಞಾನಿಕ ಹೆಸರುಳ್ಳ ಒಂದು ಏಕವಾರ್ಷಿಕ ಮೂಲಿಕ ಸಸ್ಯ (ಬಕ್ ಹ್ವೀಟ್). ಪಾಲಿಗೊನೇಸೀ ಕುಟುಂಬಕ್ಕೆ ಸೇರಿದೆ. ಯೂರೋಪ್ ಮತ್ತು ಏಷ್ಯಗಳ ಮೂಲವಾಸಿ ಇದು. ಅಮೆರಿಕ, ರಷ್ಯ, ಫ್ರಾನ್ಸ್‍ಗಳಲ್ಲಿ ವಿಶೇಷವಾಗಿ ಬೆಳೆಸುತ್ತಾರೆ. ಭಾರತದಲ್ಲಿ ಇದೂ ಮತ್ತು ಇದನ್ನು ಹೋಲುವ ಇನ್ನೆರಡು ಪ್ರಭೇದಗಳೂ (ಫ್ಯಾ. ಟಾಟಾರಿಕಮ್, ಫ್ಯಾ. ಸೈಮೋಸಮ್) ಬೆಳೆಯುತ್ವೆ. ತೇವಪೂರಿತ ತಂಪು ಪ್ರದೇಶಗಳಲ್ಲಿ ಇದು ಹುಲುಸಾಗಿ ಬೆಳೆಯುತ್ತದೆ. ಅಂತೆಯೆ ಹಿಮಾಲಯ, ಖಾಸಿ ಬೆಟ್ಟಗಳು ಮುಂತಾದೆಡೆ ಹೇರಳವಾಗಿವೆ. ನೀಲಗಿರಿ ಬೆಟ್ಟಗಳಲ್ಲೂ ಅಲ್ಪ ಪ್ರಮಾಣದಲ್ಲಿ ಬೆಳೆಸುತ್ತಾರೆ.

 ಇದು ಶೀಘ್ರವಾಗಿ ಫಸಲನ್ನು ಕೊಡುವ ಬೆಳೆ. ಕನ್ನೆ ನೆಲದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಣ್ಣು ಸಡಿಲವಾಗಿ ಕೊರೆದು ಹೋಗುವ ಭೂಮಿಗಳಲ್ಲಿ ಇದನ್ನು ಬೆಳೆಸಿದರೆ ಮಣ್ಣಿನ ಸವೆತವನ್ನು ತಡೆಯುತ್ತದೆ. ಆದ್ದರಿಂದ ಇದನ್ನು ಮಣ್ಣಿನ ಸವೆತ ತಡೆಗಟ್ಟುವ ಸಾಧನವನ್ನಾಗಿಯೂ ಬೆಳೆಸುತ್ತಾರೆ. ಗಿಡಗಳಿಂದ ಹಸಿರು ಗೊಬ್ಬರವನ್ನೂ ತಯಾರಿಸ ಬಹುದು. ಮುಖ್ಯವಾಗಿ ಕಾಡು ಗೋದಿ ಆಹಾರಕ್ಕಾಗಿ ಅಥವ ದನಗಳ ಮೇವಿಗಾಗಿ ಬೆಳೆಸುವ ಬೆಳೆ.

 ಉತ್ತರ ಭಾರತದಲ್ಲಿ ಇದನ್ನು ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬಿತ್ತನೆಮಾಡಿ ಅಕ್ಟೋಬರ್ ತಿಂಗಳಿನಲ್ಲಿ ಕೊಯಿಲು ಮಾಡುತ್ತಾರೆ. ನೀಲಗಿರಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಬಿತ್ತಿ ಆಗಸ್ಟ್ ತಿಂಗಳಲ್ಲಿ ಕೊಯಿಲು ಮಾಡುತ್ತಾರೆ. ನವೆಂಬರ್-ಜನವರಿ  ಕಾಲಗಳಲ್ಲಿ ಇದು ಬೆಳೆಯುವುದಿಲ್ಲ. ಎಕರೆಗೆ 40 ರಿಂದ 60 ಪೌಂಡು ಬೀಜವನ್ನು ಬಿತ್ತನೆಗೆ ಉಪಯೋಗಿಸಬೇಕು. ಸುಮಾರು 500 ರಿಂದ 1,200 ಪೌಂಡು ಧಾನ್ಯ ಇಳುವರಿ ಬರುತ್ತದೆ.

 ಕಾಡುಗೋದಿ ಸುಮಾರು 3' ರಿಂದ 5' ಎತ್ತರ ಬೆಳೆಯುತ್ತದೆ. ಎಲೆಗಳ ಉದ್ದ 1" ರಿಂದ 3". ಹೂಗೊಂಚಲು ಎಲೆಗಳ ಕಂಕುಳಲ್ಲಿ ಅಥವಾ ಕಾಂಡದ ತುದಿಯಲ್ಲಿ ಹುಟ್ಟುತ್ತದೆ. ಹೂ ಬಿಳಿಪು, ನೇರಳೆ ವರ್ಣ ಮುಂತಾದ ಬಣ್ಣಗಳಲ್ಲಿದ್ದು ಸುವಾಸನಾ ಭರಿತವಾಗಿರುತ್ತದೆ. ಸ್ವಪರಾಗಾರ್ಪಣೆಗೆ ಎಡೆಯೇ ಇಲ್ಲ. ಕಾಯಿ ಶಂಕುವಿನ ಆಕಾರದಲ್ಲಿದೆ. ಸುಮಾರು 0.2" ರಿಂದ 0.4" ಉದ್ದವಿರುತ್ತದೆ. ಬೂದು ಬಣ್ಣ ಅಥವಾ ಕಂದು ಬಣ್ಣವಾಗಿರುತ್ತದೆ. ಬೀಜಗಳಲ್ಲಿ ಭ್ರೂಣಾಹಾರ ಇದೆ.

 ಬೀಜಗಳಿಂದ ಹಿಟ್ಟುಮಾಡಿ ರೊಟ್ಟಿ, ಅಂಬಲಿ ಮುಂತಾದ ಆಹಾರವನ್ನು ತಯಾರಿಸುತ್ತಾರೆ. ಎಳೆಕಾಂಡ ಮತ್ತು ಎಲೆಗಳನ್ನು ತರಕಾರಿಯಾಗಿ ಉಪಯೋಗಿಸಬಹುದು. ಅಮೆರಿಕ ಮತ್ತು ರಷ್ಯ ದೇಶಗಳಲ್ಲಿ ಧಾನ್ಯವನ್ನು ಕೋಳಿಗಳಿಗೆ ಆಹಾರವಾಗಿ ಉಪಯೋಗಿಸುತ್ತಾರೆ. ಹಿಟ್ಟನ್ನು ಗೋದಿ, ಅಕ್ಕಿ, ಮುಸುಕಿನ ಜೋಳಗಳ ಹಿಟ್ಟಿ ನೊಡನೆಯೂ ಹಾಲುಪುಡಿಯೊಡನೆಯೂ ಮಿಶ್ರಮಾಡಿ ಸಮ್ಮಿಶ್ರ ಆಹಾರವಾಗಿ ಅಮೆರಿಕದಲ್ಲಿ ಮಾರಾಟ ಮಾಡುತ್ತಾರೆ.

 ಬೀಜದಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದರಲ್ಲಿ ಸೇಕಡ 11.3ರಷ್ಟು ತೇವಾಂಶ, 10.3 ಪ್ರೋಟೀನ್, 2.4 ಮೇದಸ್ಸು, 2.4 ಲವಣಾಂಶಗಳೂ 8.6 ನಾರೂ 65.0 ಶರ್ಕರಪಿಷ್ಟಗಳೂ 0.07 ಸುಣ್ಣ, 0.30 ರಂಜಕ, 13.2 ಮಿ.ಗ್ರಾಂ ಕಬ್ಬಿಣ ಇವೆ. ಜೊತೆಗೆ ಬಿ ವಿಟಮಿನ್, ನಿಕೋಟಿನಿಕ್ ಆಮ್ಲ, ತಾಮ್ರ, ನಿಕಲ್, ಜಿóಂಕ್, ಅಯೊಡೀನ್ ರೈಬೋಫ್ಲೇವಿನ್ ಮುಂತಾದ ಪದಾರ್ಥಗಳೂ ಇವೆ. ಇದರಲ್ಲಿರುವ ಪ್ರೋಟೀನ್ ಅಂಶದಲ್ಲಿ ಅನೇಕ ಮುಖ್ಯ ಅಮೈನೋ ಆಮ್ಲಗಳಿವೆ. ಇವುಗಳಲ್ಲಿ ಲೈಸಿನ್ ಎಂಬುದು ಬಹಳ ಮುಖ್ಯವಾದುದು.

 ಹಿಟ್ಟನ್ನು ಮದ್ಯಸಾರ ಮತ್ತು ಬ್ರೆಡ್‍ತಯಾರಿಕೆ ಮುಂತಾದವುಗಳಲ್ಲಿನ ರಾಸಾಯನಿಕ ಕ್ರಿಯೆಗಾಗಿ ಉಪಯೋಗಿಸಬಹುದು. ಹೊಟ್ಟಿನಿಂದ ಬಣ್ಣವನ್ನು ತಯಾರಿಸುತ್ತಾರೆ. ಹೂಗಳಲ್ಲಿ ಮಕರಂದ ಹೆಚ್ಚಾಗಿರುವುದರಿಂದ ಈ ಗಿಡವನ್ನು ಜೇನುಸಾಕಣೆಗಾಗಿ ರಷ್ಯ ಮತ್ತು ಅಮೆರಿಕ ದೇಶಗಳಲ್ಲಿ ಹೇರಳವಾಗಿ ಬೆಳೆಸುತ್ತಾರೆ. ಇದರ ಜೇನುತುಪ್ಪ ಅತಿ ಶ್ರೇಷ್ಠ ವರ್ಗದ್ದೆಂದು ಹೇಳಲಾಗುತ್ತದೆ. ಬೀಜಗಳಿಂದ ರೂಟಿನ್ ಎಂಬ ರಾಸಾಯನಿಕ ವಸ್ತುವನ್ನು ತೆಗೆಯುತ್ತಾರೆ. ಇದು ಹರಳು ರೂಪದಲ್ಲಿರುವ ಹಳದಿ ಬಣ್ಣದ ವಸ್ತು. ಇದನ್ನು ರಕ್ತನಾಳಗಳ ಸಿಡಿತ, ಮೂತ್ರಪಿಂಡಗಳಲ್ಲಿನ ರಕ್ತಸ್ರಾವ ಮುಂತಾದ ರೋಗಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಕಾಡುಗೋದಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಕೆಲವು ಪ್ರಾಣಿಗಳಲ್ಲಿ ಫ್ಯಾಗೋಪೈರಿಸಂ ಎಂಬ ರೋಗವುಂಟಾಗುತ್ತದೆ. ಮನುಷ್ಯರಲ್ಲಿ ಇದರ ಅಧಿಕ ಸೇವನೆಯಿಂದ ಪೈತ್ಯವುಂಟಾಗುತ್ತದೆ. ಕೆಲವರಿಗೆ ಮೈಮೇಲೆ ಬೊಬ್ಬೆಗಳಾಗುವುದೂ ಉಂಟು.

 

(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ